ಎಲೆಕ್ಟ್ರಾನಿಕ್ ನಕಾಶೆ ಕೆತ್ತನೆ: ವಿದ್ಯುತ್ ಪ್ರಕಾಶದ ಕೋಶಗಳು ಮೂಲಪ್ರತಿಯಿಂದ ಪ್ರತಿಫಲಿತವಾದ ಅಥವಾ ಪ್ರಸರಿಸಲ್ಪಟ್ಟ ಕಿರಣಗಳನ್ನು ಉಪಯೋಗಿಸಿಕೊಂಡು ಕೆತ್ತುವ ಸಾಧನಕ್ಕೆ ಶಕ್ತಿಯನ್ನು ಕೊಟ್ಟು ಅದರ ಅಡಿಯಲ್ಲಿರುವ ಲೋಹದ ಅಥವಾ ಲೆಪ್ಪದ ಫಲಕದ ಮೇಲೆ ನೇರವಾಗಿ ನಡೆಸುವ ಕ್ರಿಯೆ (ಎಲೆಕ್ಟ್ರಾನಿಕ್ ಎನ್ಗ್ರೇವಿಂಗ್). ಇತರ ವಿಧಾನಗಳ ಸ್ಥೂಲ ಕಲ್ಪನೆ ಇದ್ದರೆ ಎಲೆಕ್ಟ್ರಾನಿಕ್ ನಕಾಶೆ ಕೆತ್ತನೆಯಲ್ಲಿರುವ ಸೂಕ್ಷ್ಮ ಸುಧಾರಣೆ ತಿಳಿಯುತ್ತದೆ. ಲಿಪಿ ಮುದ್ರಣ (ಲೆಟರ್ ಪ್ರೆಸ್) ಇಂಥ ಒಂದು ಇತರ ವಿಧಾನ. ಈ ವಿಧಾನದಿಂದ ಚಿತ್ರಗಳನ್ನು ಮುದ್ರಿಸಲು ಉಬ್ಬುಶಿಲ್ಪದ ಅಚ್ಚಿನ ಮೈಯುಳ್ಳ ಮುದ್ರಾಫಲಕಗಳಿರಬೇಕು. ಸಾಧಾರಣವಾಗಿ ರೂಡಿಯಲ್ಲಿರುವ ಸಾಂಪ್ರದಾಯಿಕ ಪದ್ಧತಿಯಲ್ಲಿ, ಒಂದು ಆಮ್ಲದ ಸಹಾಯದಿಂದ ಅಚ್ಚಾಗದ ಭಾಗವನ್ನು ಹಲವಾರು ಹಂತಗಳಲ್ಲಿ ಕೊರೆದು ಆಮ್ಲನಿರೋಧ ಬಿಂಬದ ಸಹಾಯದಿಂದ ಅಚ್ಚಾಗುವ ಭಾಗವನ್ನು ಸಂರಕ್ಷಿಸಿ ಈ ಫಲಕಗಳನ್ನು ತಯಾರಿಸಲಾಗುವುದು. ಉತ್ತಮವಾದ ಮುದ್ರಾಫಲಕಗಳನ್ನು ತಯಾರಿಸುವ ಮತ್ತು ಅನೇಕ ಅನುಕೂಲತೆಗಳನ್ನೊಳಗೊಂಡಿರುವ ಪೌಡರ್ ರಹಿತ ಕೊರೆಯುವಿಕೆ (ಪೌಡರ್ಲೆಸ್ ಎಚ್ಚಿಂಗ್) ಹಾಗೂ ಎಲೆಕ್ಟ್ರಾನಿಕ್ ಕೆತ್ತನೆ (ಎನ್ಗ್ರೇವಿಂಗ್) ಮುಂತಾದ ನವೀನ ಪದ್ಧತಿಗಳು ಬಳಕೆಗೆ ಬಂದಿರುವ ಪ್ರಯುಕ್ತ ಈ ಸಾಂಪ್ರದಾಯಿಕ ಪದ್ಧತಿ ಕ್ರಮೇಣ ಕ್ಷೀಣಿಸುತ್ತಿದೆ ಮೂಲ ಚಿತ್ರಗಳ, ಅದರಲ್ಲೂ ವರ್ಣರಂಜಿತ ಚಿತ್ರಗಳ, ಪ್ರತಿಯ ಪುನರುತ್ಪಾದನೆಯನ್ನು ಶೀಘ್ರವಾಗಿ, ಮತ್ತು ಚೊಕ್ಕವಾಗಿ ತಯಾರಿಸುವ ದೃಷ್ಟಿಯಿಂದ ಎಲೆಕ್ಟ್ರಾನಿಕ್ ನಕಾಶೆ ಕೆತ್ತನೆ ಬಹಳ ಉಪಯುಕ್ತವಾಗಿದೆ. ಈ ಪದ್ಧತಿಯಲ್ಲಿ ಲೋಹದ ಮೇಲೆ ಬಿಂಬವನ್ನು ಛಾಯಾಗ್ರಹಣ ಮಾಡುವುದರ ಬದಲು ಮೂಲಪ್ರತಿಯ ಬಹಳ ಕಿರಿದಾದ ಭಾಗವನ್ನು ಮಾತ್ರ ಒಂದು ಬಾರಿಗೆ ಬೆಳಕಿಗೆ ಒಡ್ಡಲಾಗುತ್ತದೆ. ಈ ಬಗೆಯ ಕಿರಿದಾದ ಪ್ರತಿಫಲಿತವಾದ ಅಥವಾ ಪ್ರಸರಿಸಲ್ಪಟ್ಟ ಬೆಳಕಿನ ಕಿರಣಗಳನ್ನು ದ್ಯುತಿವಿದ್ಯುತ್ಕೋಶಗಳು (ಫೋಟೋ ಎಲೆಕ್ಟ್ರಿಕ್ ಸೆಲ್ಸ್‌) ಸ್ವೀಕರಿಸುತ್ತವೆ. ಪತನ ಬೆಳಕಿನ ಪ್ರಮಾಣಕ್ಕನುಸಾರವಾದ ವಿದ್ಯುತ್ ಪ್ರವಾಹವನ್ನುಂಟುಮಾಡುವ ಸಾಮಥರ್ಯ್‌ ಕೋಶಗಳಿಗೆ ಇದೆ. ಇದರಿಂದಾಗಿ ಮೂಲಚಿತ್ರದ ಶ್ವೇತವರ್ಣದಿಂದ ತೊಡಗಿ ಕಪ್ಪುವರ್ಣದವರೆಗಿನ ಎಲ್ಲ ಅಂತರಗಳ ಮೇಲೆಯೂ ಬೆಳಕಿನ ಕಿರಣವನ್ನು ಹಾಯಿಸಿದಾಗ ಅಂಥ ಶ್ವೇತವರ್ಣ ಮತ್ತು ಕಪ್ಪು ವರ್ಣಗಳ ನಡುವಣ ವರ್ಣಾಂತರಗಳ ರೀತ್ಯ ದ್ಯುತಿವಿದ್ಯುತ್ ಕೋಶದಲ್ಲಿನ ವಿದ್ಯುತ್ ಪ್ರವಾಹದಲ್ಲಿ ವ್ಯತ್ಯಾಸವುಂಟಾಗುವುದು. ಈ ವಿದ್ಯುತ್ ಪ್ರವಾಹದ ಪ್ರಮಾಣವನ್ನು ಅನುಸರಿಸುವ ಕೆತ್ತುವ ಸಾಧನ ಅದರ ಅಡಿಯಲ್ಲಿರುವ ಫಲಕದ ಮೇಲೆ ಅತಿ ಸೂಕ್ಷ್ಮ ಹಾಗೂ ವಿಭಿನ್ನ ಗಾತ್ರದ ರಂಧ್ರಗಳನ್ನು ಕೊರೆಯುವುದು. ಕಿರಿದಾದ ಬೆಳಕಿನ ಕಿರಣವನ್ನು ಮೂಲಪ್ರತಿಯ ಪ್ರತಿಯೊಂದು ಭಾಗದ ಮೇಲೆಯೂ ಸರಳರೇಖೆಯಲ್ಲಿ ಪ್ರಸರಿಸಲಾಗುವುದು. ಇದಕ್ಕೆ ಕ್ರಮವೀಕ್ಷಣೆ (ಸ್ಕ್ಯಾನಿಂಗ್) ಎಂದು ಹೆಸರು.

ಕ್ಲಿಸ್ಚೊಗ್ರಾಫ್ ಎಂಬ ಯಂತ್ರ ಎಲೆಕ್ಟ್ರಾನಿಕ್ ನಕಾಶೆ ಕೆತ್ತನೆಯಲ್ಲಿ ಪ್ರಸಿದ್ಧವಾಗಿರುವ ಯಂತ್ರಗಳಲ್ಲಿ ಒಂದು. ಈ ಯಂತ್ರದಲ್ಲಿ ಬೆಳಕಿನ ಕಿರಣಗಳು ಸ್ಥಾಯಿಯಾಗಿದ್ದು ಚಿತ್ರದ ನಕಲು ಸಮತಲವಾಗಿ ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ. ಹೀಗೆ ಹಾದು ಹೋದ ಪ್ರತಿರೇಖೆಯ  ಕೊನೆಯಲ್ಲಿ ಬೆಳಕಿನ ಕಿರಣ ಅಂಥ ಎಡೆಯಾಟಕ್ಕೆ ಲಂಬವಾದ ದಿಕ್ಕಿನಲ್ಲಿ ಸ್ವಲ್ಪಮಟ್ಟಿಗೆ ಚಲಿಸುವುದು. ಆ ಕೂಡಲೆ ಮೂಲಪ್ರತಿಯ ಎಡೆಯಾಟ ಪುನಃ ಪ್ರಾರಂಭವಾಗುವುದು. ಈ ಕ್ರಿಯೆ ಸ್ವಯಂಚಾಲಿತವಾಗಿ ಕ್ರಮವೀಕ್ಷಣೆಯ ಕೆಲಸ ಪುರ್ಣಗೊಳ್ಳುವವರೆವಿಗೂ ನಡೆಯುವುದು. 
ಅಂತೆಯೇ, ಕೆತ್ತನೆಯ ಸಾಧನದ ಕೆಳಗೆ ಇಟ್ಟ ಲೋಹದ ಅಥವಾ ಲೆಪ್ಪದ ಫಲಕವೂ ಚಿತ್ರದ ಪ್ರತಿಯೊಂದಿಗೆ ಹಿಂದಕ್ಕೂ ಮುಂದಕ್ಕೂ ಚಲಿಸುವುದು. ಕೆತ್ತನೆಯ ಸಾಧನಕ್ಕೆ ಒಂದು ಗಿ ಆಕಾರದ ಕಂಟಿಕೆಯನ್ನು (ಸ್ಟೈಲಸ್) ಅಳವಡಿಸಿರುತ್ತದೆ. ವಿದ್ಯುತ್ ಪ್ರಕಾಶದ ಕೋಶಗಳಿಂದ ಬರುವ ವಿದ್ಯುತ್ ಕಂಪನಗಳು ಕಂಟಿಕೆಯನ್ನು ಸಂಚಾಲಿಸಿದಾಗ ಅದು ಕೆಳಗಿರುವ ಫಲಕದ ಮೇಲೆ ನಿಯತಕಾಲಿಕವಾಗಿ ಕೆತ್ತನೆ ಮಾಡುತ್ತದೆ. ಅಂಥ ಪ್ರತಿಯೊಂದು ಕೆತ್ತನೆಯ ಆಳವೂ ವಿದ್ಯುತ್ಕೋಶದಿಂದ ಬರುವ ವಿದ್ಯುತ್ಪ್ರವಾಹಕ್ಕೆ ಅನುಗುಣವಾಗಿರುತ್ತದೆ. 

ವಿಶೇಷ ಗಾತ್ರದ ಕಂಟಿಕೆ ವಜ್ರಾಕಾರದ ರಂಧ್ರವನ್ನು ಕೆತ್ತುತ್ತದೆ. ಈ ರೀತಿ ಫಲಕದ ಮೇಲೆ ಪರಿಣಮಿಸುವ ರಂಧ್ರದ ಅಗಲ ಕಂಟಿಕೆ ಫಲಕದಲ್ಲಿ ಎಷ್ಟು ಆಳಕ್ಕೆ ಹೋಗುವುದೊ ಅದನ್ನು ಅವಲಂಬಿಸಿದೆ. 

ಒಂದು ಅಂಗುಲದಷ್ಟು ಅಗಲದಲ್ಲಿ ನೂರಾರು ಸಾಲು ರಂಧ್ರಗಳನ್ನು ಈ ಯಂತ್ರ ಕೆತ್ತಬಲ್ಲುದು. ಇದರ ಅಣುವಿದ್ಯುತ್ ಘಟಕ ದ್ಯುತಿ ವಿದ್ಯುತ್ ಸಂಕೇತಗಳನ್ನು ಬೇಕಾದ ಪ್ರಮಾಣಕ್ಕೆ ಗಾತ್ರ ವ್ಯತ್ಯಾಸ ಮಾಡಬಲ್ಲುದು; ಮತ್ತು ಆ ಪ್ರಯುಕ್ತ ಮೂಲಪ್ರತಿಯ ಛಾಯಾ ಹಾಗೂ ಅತ್ಯುಜ್ಜ್ವಲ (ಹೈಲೈಟ್) ಭಾಗಗಳಲ್ಲಿನ ಭೇದ ಕಡಿಮೆಯಾಗದಿದ್ದರೆ ಆ ನ್ಯೂನತೆಯನ್ನು ಸಹ ಸರಿಪಡಿಸಿ ಬೇಕಾದ ಛಾಯೆಗಳನ್ನೂ ಅರ್ಧ ಛಾಯಾ ಭಾಗಗಳನ್ನೂ ಅತ್ಯುಜ್ಜ್ವಲ ಭಾಗಗಳನ್ನೂ ಒಳಗೊಂಡ ಫಲಕವನ್ನು ಕೊಡಬಲ್ಲುದು.

ಈ ಯಂತ್ರಗಳಲ್ಲಿ ಕೆಲವಕ್ಕೆ ಸಮತಟ್ಟಾದ ಪ್ರತಿಫಲಿಸುವ ಚಿತ್ರಪಟಲಗಳೇ ಬೇಕು. ಮತ್ತೆ ಕೆಲವಕ್ಕೆ ಪಾರದರ್ಶಕ ಚಿತ್ರಪಟಲಗಳೇ ಬೇಕು. ಇನ್ನು ಕೆಲವು ಯಂತ್ರಗಳು ಈ ಎರಡು ವಿಧದ ಚಿತ್ರಪಟಲಗಳನ್ನೂ ಉಪಯೋಗಿಸಬಲ್ಲುವು. ಚಿತ್ರದ ಮೂಲಪ್ರತಿಗಿಂತ ಚಿಕ್ಕದಾದ  ಹಾಗೂ ದೊಡ್ಡದಾದ ನಕಾಶೆ ಕೆತ್ತನೆ ಫಲಕಗಳನ್ನು ಉತ್ಪಾದಿಸುವ ಯಂತ್ರಗಳೂ ಇವೆ. ಕ್ಲಿಸ್ಚೊಗ್ರಾಫ್ ಯಂತ್ರಗಳ ಗುಂಪಿನಲ್ಲಿ ಇತ್ತೀಚೆಗೆ ವಾಡಿಕೆಗೆ ಬಂದಿರುವ ವೇರಿಯೊಕ್ರೋಮೋಗ್ರಾಫ್ ಯಂತ್ರ ಈ ತೆರನಾದ ಚಿತ್ರವನ್ನು ಮೂಲಕ್ಕಿಂತ 20 ಪಾಲು ವಿಸ್ತರಿಸಬಲ್ಲುದಷ್ಟೇ ಅಲ್ಲದೆ ಒಂದು ಅಂಗುಲದಷ್ಟು ಪ್ರದೇಶದಲ್ಲಿ 500 ರಿಂದ 1500ರ ವರೆಗೆ ಸಾಲುಗಳನ್ನು ಉಂಟುಮಾಡಲೂಬಲ್ಲುದು. ಇಷ್ಟೇ ಅಲ್ಲ, ತ್ರಿವರ್ಣ ಅಥವಾ ನಾಲ್ಕು ವರ್ಣಗಳಲ್ಲಿ ಮುದ್ರಿಸಲು ಬೇಕಾಗುವ 3 ಅಥವಾ 4 ನಕಾಶೆ ಕೆತ್ತನೆಗಳನ್ನು ಒಂದೇ ಮೂಲ ಪ್ರತಿಯಿಂದ ಏಕಕಾಲದಲ್ಲಿ ಉತ್ಪಾದಿಸುವ ಯಂತ್ರಗಳೂ ಇವೆ. ವೇರಿಯೊ ಕ್ಲಿಸ್ಚೊಗ್ರಾಫ್ ಎಂಬ ಯಂತ್ರದಲ್ಲಿ ನಕಾಶೆ ಕೆತ್ತನೆ ಮಾಡಿದ ಫಲಕವನ್ನಾಗಲೀ ವರ್ಣ ಪರಿಷ್ಕರಣ ಮಾಡಿದ ಮತ್ತು ಹಾಫ್ಟೋನ್ ಸ್ಕ್ರೀನ್ ಮಾಡಿದ ಋಣ ಅಥವಾ ಧನ ಚಿತ್ರವನ್ನಾಗಲೀ ಉತ್ಪಾದಿಸಬಹುದು. ಈ ಬಗೆಯ ಯಂತ್ರಗಳೂ (ಮೂಲ ಪ್ರತಿಯನ್ನು ಸಮತಟ್ಟಾಗಿಯೇ ಆಗಲಿ ಅಥವಾ ವರ್ತುಳಾಕಾರದಲ್ಲಿಯೇ ಆಗಲಿ ತೆಗೆದುಕೊಳ್ಳುವಂಥ ಯಂತ್ರಗಳಲ್ಲಿ) ಇದುವರೆಗೆ ತೆಗೆದುಕೊಳ್ಳಬಲ್ಲ ಅತ್ಯಂತ ಹೆಚ್ಚಿನ ಅಳತೆಯ ಮೂಲಪ್ರತಿಯೆಂದರೆ ಸು. 45ಮೀx33ಮೀ ಇರುವಂಥದು; ಮತ್ತು ಇವುಗಳಿಂದ ಪಡೆಯಬಹುದಾದ ನಕಾಶೆ ಕೆತ್ತನೆ ಮಾಡಿರುವ ಫಲಕಗಳ ಅಳತೆ ಸು. 43ಮೀx30ಮೀ. 
ಬಣ್ಣದ ನಕಾಶೆ ಕೆತ್ತನೆ: ಮೇಲೆ ವಿವರಿಸಿದ ಯಂತ್ರಗಳ ಪೈಕಿ ಕೆಲವಲ್ಲಿ ತ್ರಿವರ್ಣ ಅಥವಾ ನಾಲ್ಕು ವರ್ಣಗಳ ನಕಾಶೆ ಕೆತ್ತನೆ ಮಾಡಿದ ಅಚ್ಚಿನ ಫಲಕಗಳನ್ನು ಉತ್ಪಾದಿಸಿ 3 ಅಥವಾ 4 ಬಣ್ಣಗಳ ಶಾಯಿಗಳನ್ನು ಬಳಸಿ ವರ್ಣರಂಜಿತ ಚಿತ್ರಗಳನ್ನು ಮುದ್ರಿಸಬಹುದು. ಇವು ಮೂಲತಃ ಎಲೆಕ್ಟ್ರಾನಿಕ್ ಕೆತ್ತನೆ ಯಂತ್ತಗಳೇ ಆಗಿದ್ದರೂ ಇವುಗಳಲ್ಲಿ ವರ್ಣಪರಿಷ್ಕರಣ ಮಾಡುವ ಕೆಲವು ಸೌಲಭ್ಯಗಳಿವೆ. 

ಉದಾಹರಣೆಗೆ, ಕಲರ್ ಕ್ಲಿಸ್ಚೊಗ್ರಾಫ್ ಯಂತ್ರದಲ್ಲಿ ಪ್ರತಿಯೊಂದು ಬಣ್ಣದ ಫಲಕವನ್ನು ತಯಾರಿಸುವಲ್ಲಿಯೂ ಎರಡು ಪ್ರತ್ಯೇಕ ವರ್ಣಶೋಧಕಗಳನ್ನು ಉಪಯೋಗಿಸಬೇಕು. ಮೆಜೆಂಟ ಬಣ್ಣದ ಫಲಕವನ್ನು ತಯಾರಿಸುವಲ್ಲಿ ಮೂಲಪ್ರತಿಯ ಮೇಲೆ ಪತನವಾದ ಬೆಳಕಿನ ಕಿರಣವನ್ನು ಎರಡು ದ್ಯುತಿ ವಿದ್ಯುತ್ ಕೋಶಗಳಿಂದ ಗ್ರಹಿಸಲಾಗುತ್ತದೆ. ಇವುಗಳಲ್ಲಿ ಒಂದು ಹಸಿರು ಶೋಧಕದ ಮೂಲಕ ಹಾದು ಬಂದ ಬೆಳಕನ್ನೂ ಮತ್ತೊಂದು ಕೆಂಪು ಶೋಧಕದ ಮೂಲಕ ಹಾದು ಬಂದ ಬೆಳಕನ್ನೂ ಗ್ರಹಿಸುತ್ತವೆ. ಹಸಿರುಶೋಧಕ ದ್ಯುತಿ ವಿದ್ಯುತ್ ಕೋಶದಿಂದ ಬರುವ ಸಂಕೇತವು ಪರಿಷ್ಕೃತವಲ್ಲದ ಮಜೆಂಟ ಬಣ್ಣದ ಸಹಜ (ಧನ) ಚಿತ್ರ ಸಂಬಂಧಿಯಾಗಿರುತ್ತದೆ; ಮತ್ತು ಕೆಂಪುಶೋಧಕ ದ್ಯುತಿ ವಿದ್ಯುತ್ ಕೋಶದಿಂದ ಬರುವ ಸಂಕೇತವು ಸೂಕ್ತ ರೀತಿಯ ಅಣುವಿದ್ಯುತ್ (ಎಲೆಕ್ಟ್ರಾನಿಕ್) ಮಾರ್ಪಾಟು ಹೊಂದಿದ ಅನಂತರ ಸೈಯಾನ್ ವಿಷಮ (ಋಣ) ಚಿತ್ರ ಸಂಬಂಧಿಯಾಗಿರುತ್ತದೆ. ಈ ಎರಡೂ ಸಂಕೇತಗಳನ್ನು ಒಂದು ಗಾತ್ರ ವ್ಯತ್ಯಾಸ ಮಾಡುವ ಮಾಡ್ಯುಲೇಟರಿನಲ್ಲಿ ಸಂಯೋಜಿಸಿ ಅದರಿಂದ ಬರುವ ಸಂಕೇತವನ್ನು ಕೆತ್ತನೆ ಸಾಧನೆಗೆ ಪ್ರವಹಿಸಲಾಗುತ್ತದೆ. ಇದರಿಂದ ಉತ್ಪಾದಿಸಿದ ಫಲಕ ವರ್ಣಪರಿಷ್ಕೃತವಾದ ಮಜೆಂಟ ಬಣ್ಣದ ಹಾಫ್ಟೋನ್ ಅಚ್ಚಿನ ಪಡಿಯಾಗಿರುತ್ತದೆ. ಸೈಯಾನ್ ಮತ್ತು ಹಳದಿ ಹಾಫ್ಟೋನ್ ಅಚ್ಚಿನ ಪಡಿಗಳನ್ನೂ ಈ ರೀತಿಯಲ್ಲಿಯೇ ಆದರೆ ಬೇರೆ ಬಣ್ಣದ ಶೋಧಕಗಳನ್ನು ಉಪಯೋಗಿಸಿ ತಯಾರಿಸಲಾಗುವುದು.

ಈ ವಿಧಾನದಲ್ಲಿ ವರ್ಣಪರಿಷ್ಕರಣ ಮಾಡುವ ರೀತಿ ಪೋಟೊಗ್ರಾಫಿಕ್ ಮಾಸ್ಕಿಂಗ್ ವಿಧಾನದಲ್ಲಿ ಅನುಸರಿಸುವ ರೀತಿಯಲ್ಲಿ ಸ್ಪಲ್ಪಮಟ್ಟಿಗೆ ಹೋಲುತ್ತದೆ. ಆದರೆ ಆನುವಿದ್ಯುತ್ ವಿಧಾನದಲ್ಲಿ ಕೆಲವು ಹೆಚ್ಚು ಸೌಲಭ್ಯಗಳಿರುವ ಪ್ರಯುಕ್ತ ಈ ವಿಧಾನ ಹೆಚ್ಚು ಅನುಕೂಲಕರ ವಾಗಿದೆ. 

ಮೂಲಚಿತ್ರ ಹೇಗೇ ಇದ್ದರೂ ತಕ್ಕಂಥ ವರ್ಣ ಪರಿಷ್ಕಾರವನ್ನು ಕೊಡಬಲ್ಲ ಅನುಕೂಲತೆಯೇ ಇವುಗಳಲ್ಲಿ ಅತ್ಯಂತ ಮುಖ್ಯವಾದದ್ದು. ಅಷ್ಟೇ ಅಲ್ಲದೆ ನಕಾಶೆ ಕೆತ್ತನೆ ಮಾಡುವ ಮೊದಲೇ ಯಾವುದೇ ಭಾಗಕ್ಕೆ ಸಂಬಂಧಿಸಿದಂತೆ ಕೆತ್ತಲಾಗುವ ಪ್ರತಿಯೊಂದು ಫಲಕದಲ್ಲಿ ಉಂಟಾಗಬಹುದಾದ ಚುಕ್ಕೆಯ ಪ್ರಮಾಣವನ್ನು ಮೊದಲಲ್ಲಿಯೇ ನಿರ್ದಿಷ್ಟಗೊಳಿಸಬಹುದು.
ವರ್ಣ ಕ್ಲಿಸ್ಚೊಗ್ರಾಫ್ ಯಂತ್ರದ ಬೆಲೆ ಇತರ ನಕಾಶೆ ಕೆತ್ತನೆ ಮಾಡುವ ಯಂತ್ರಗಳ ಬೆಲೆಗಳಿಗಿಂತ ಕಡಿಮೆ. ಈ ಯಂತ್ರದಿಂದ ಲಭಿಸುವ ವರ್ಣಪರಿಷ್ಕರಣ ಮೂಲಚಿತ್ರದ ನಿಜವಾದ ವರ್ಣಕ್ಕೆ ಸರಿಸುಮಾರು ಶೇ. 90 ಸಮನಾಗಿರುತ್ತದೆ. ಶೇ. 100 ಪಾಲು ವರ್ಣ ಪರಿಷ್ಕರಣವನ್ನು ಕೊಡಬಲ್ಲ ಯಂತ್ರಗಳೂ ಇವೆ. 		  (ಡಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ